ಪ್ರಳಯವಾದ

ಭೂಚರಿತ್ರೆಯಲ್ಲಿ ಆಗಿಂದಾಗ್ಯೆ ನಡೆದಿರುವ ತೀವ್ರ ರೀತಿಯ ಉತ್ಪಾತಗಳಿಂದ ನೆಲ ಜಲದಲ್ಲಾದ ಬದಲಾವಣೆಗಳಿಗೆ ಸಂಬಂಧಿಸಿದ ಸಿದ್ಧಾಂತ (ಕ್ಯಟಸ್ಟ್ರಾಫಿಸಮ್). ಪ್ರಳಯವಾದ ಮತ್ತು ಸತತ ಸಾಮಾನ್ಯ ಪರಿಣಾಮ ವಾದಗಳೆರಡೂ ಭೂವೈಜ್ಞಾನಿಕ ಚಿಂತನೆಯಲ್ಲಿ ಮೂಲತತ್ತ್ವಗಳು. ಇವೆರಡರ ಪೈಕಿ ಪ್ರಳಯವಾದ ಪ್ರಥಮವಾದುದು. ಈ ವಾದವನ್ನು ಎರಡನೆಯ ವಾದ ಸ್ಥಾನಪಲ್ಲಟ ಮಾಡಿತು. ಜೇಮ್ಸ್ ಹಟ್ಟನ್ (1726-97) ಮತ್ತು ಸರ್ ಚಾಲ್ರ್ಸ್ ಲಯಲ್ (1797-1875) ಎಂಬ ಬ್ರಿಟಿಷ್ ಭೂವಿಜ್ಞಾನಿಗಳ ಮಹತ್ತರ ಆಲೋಚನಾ ಪ್ರಭಾವವೇ ಈ ವಾದದ ಸ್ಥಾನಪಲ್ಲಟಕ್ಕೆ ಕಾರಣವಾಯಿತು. ಪ್ರಳಯ ಅಥವಾ ಉತ್ಪಾತ ಎಂಬ ಭಾವನೆ ಅತಿಪ್ರಾಚೀನ ಕಾಲದಲ್ಲೇ ಮೂಡಿದೆ. ಮುಖ್ಯವಾಗಿ ಭೂಮಿಯ ಜಲಜಶಿಲಾಪದರಗಳಲ್ಲಿ ಅನುಕ್ರಮವಾಗಿ ಸಿಗುವ ಜೀವ್ಯವಶೇಷಗಳನ್ನು ವಿವರಿಸಲು ಭೂಮಿಯಲ್ಲಿ ಆಗಿಂದಾಗ್ಯೆ ಏರ್ಪಟ್ಟ ಉದ್ರೇಕಗಳಿಂದ ಜೀವಿಗಳ ನಿರ್ನಾಮವಾಗಿ, ಮತ್ತೆ ಮತ್ತೆ ಹೊಸ ಜೀವಿಗಳ ಸೃಷ್ಟಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಸ್ಥೂಲವಾಗಿ ಹೇಳುವುದಾದರೆ ತೀವ್ರತರವಾದ ಭೂಕಂಪನ ಮತ್ತು ಅದರಿಂದಾಗುವ ತೀವ್ರ ಬದಲಾವಣೆಗಳು ಹಾಗೂ ಪ್ರಬಲವಾದ ಜಲಪ್ರಳಯದಿಂದ (ಡೆಲ್ಯೂಜ್) ವಿಶಾಲ ಭೂಭಾಗಗಳು ನೀರಿನಿಂದ ಆವೃತವಾಗುವುದು ಇವನ್ನೆಲ್ಲ ಅನೇಕ ವೇಳೆ ಪ್ರಳಯ ಅಥವಾ ಉತ್ಪಾತ ಎಂದು ಕರೆಯುತ್ತೇವೆ.

ವಾಸ್ತವವಾಗಿ ಪ್ರಳಯವಾದವನ್ನು ಒಪ್ಪುವುದಕ್ಕೂ ಒಂದು ಶತಮಾನದ ಮುಂಚೆಯೇ ಡಚ್ ಭೌತವಿಜ್ಞಾನಿ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕ ನಿಕೊಲಾಸ್ ಸ್ಟೆನೊನ ಸಮಕಾಲೀನನಾದ ರಾಬರ್ಟ್ ಹುಕ್ (1635-1703), ಭೂಪದರಗಳಲ್ಲಿ ಖಡ್ಗಮೃಗ, ನೀರಾನೆ ಮುಂತಾದ ವಿವಿಧ ಜೀವ್ಯವಶೇಷಗಳನ್ನು ಕಂಡು ಭೂಮಿಯಲ್ಲಿಯ ಈ ರೀತಿಯ ವ್ಯತ್ಯಾಸಗಳು ಭೂಚರಿತ್ರೆಯಲ್ಲಿ ಹಲವಾರು ಹಂತಗಳಲ್ಲಾದ ಉತ್ಪಾತ ಅಥವಾ ಪ್ರಳಯ ಮತ್ತು ಅನುವಂಶೀಯ ಬದಲಾವಣೆಗಳನ್ನು ತಿಳಿಸಲು ನೆರವಾಗುವುವೆಂದು ವಿವರಿಸಿದ್ದ. ಇಂಥ ಪ್ರಳಯಗಳಿಂದ ಭೂಮಿಯ ಹೊರಪದರದಲ್ಲಿ ಏರಿಳಿತಗಳಾಗಿ ಪ್ರವಾಹಗಳುಂಟಾಗಿ, ಅನೇಕ (ಸಾಗರ ಮತ್ತು ಭೂವಾಸಿ) ಜೀವಿಗಳ ವಂಶ ನಷ್ಟವಾಯಿತು. ಪ್ರಳಯಕಾಲದಲ್ಲಿ ವಲಸೆ ಹೋಗಿ ಪ್ರಶಾಂತ ಸ್ಥಳಗಳಲ್ಲಿ ನೆಲಸಿದ್ದ ಹಲವಾರು ಜೀವಿಗಳು, ವಾತಾವರಣ ಪ್ರಶಾಂತವಾದ ಕೂಡಲೇ ಬೇರೆ ಕಡೆಗಳಿಂದ ಮತ್ತೆ ಹಿಂತಿರುಗಿ ಬಂದು ನೆಲಸಿದುವು. ಹಾಗೆಯೇ, ಪ್ರಶಾಂತ ವಾತಾವರಣದಲ್ಲಿ ಅನೇಕ ಹೊಸಜೀವಿಗಳು ಉತ್ಪತ್ತಿಯಾದುವು, ಬೈಬಲ್ ಗ್ರಂಥದಲ್ಲಿ ಸೂಚಿಸಿರುವ ಮಹಾಪ್ರಳಯವೂ (ಡೆಲ್ಯೂಜ್) ಈ ರೀತಿಯದು ಮತ್ತು ಅದು ಸುಮಾರು 5000ದಿಂದ 6000 ವರ್ಷಗಳ ಹಿಂದೆ ನಡೆದಿದೆಯೆಂದು ವಿವರಿಸಿದ. ಈಗ ಕಾಣುವ ವಿಶಾಲ ಮೆಕ್ಕಲು ಮಣ್ಣಿನ ಪ್ರದೇಶಗಳು ಮತ್ತು ಆಳವಾದ ಕಣಿವೆ ಕಂದರಗಳು ಆ ಪ್ರಳಯದ ಪರಿಣಾಮವೆಂದು ನಿರ್ಧರಿಸಿದ. ಇದೇ ಕಾಲದಲ್ಲಿ ಅಮೆರಿಕದ ಸಾಮ್ಯುಯಲ್ ಮಿಚ್ಚೆಲ್ ಮತ್ತು ಬೆಂಜಮಿನ್ ಸಿಲ್ಲಿಮನ್ ಮುಂತಾದವರೂ ಈ ವಾದದಲ್ಲಿ ನಂಬಿಕೆ ಇಟ್ಟು ಪ್ರಚಾರ ಮಾಡುತ್ತಿದ್ದರು.

ಭೂಮಿಯ ಹೊರಪದರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಪ್ರಳಯ ಅಥವಾ ಉತ್ಪಾತಗಳೇ ಕಾರಣವೆಂದು ಯೋಚಿಸುವುದು ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನದಲ್ಲಿ ಸಹಜವಾಗಿತ್ತು. ಈ ಕಾಲಾವಧಿಯಲ್ಲಿ ಇಂಗ್ಲೆಂಡಿನ ಪ್ರಖ್ಯಾತ ಭೂವಿಜ್ಞಾನಿ ವಿಲಿಯಮ್ ಬಕ್‍ಲಾಂಡ್ (1784-1856) ಪ್ರಳಯವಾದದ ಪ್ರಮುಖ ಪ್ರತಿಪಾದಕನಾಗಿದ್ದ. ಆತ ಅನೇಕ ಕಶೇರುಕ ಪ್ರಾಣಿಗಳ ಅವಶೇಷಗಳನ್ನು ತೃತೀಯ ಭೂಕಾಲದಿಂದೀಚಿನ ಶಿಲೆಗಳಿಂದ ಹೊರತೆಗೆದು ಅವೆಲ್ಲವೂ ನೋಹನ ಜಲಪ್ರಳಯದಿಂದಾದ ಮಣ್ಣಿನಿಂದ ಮುಚ್ಚಲಟ್ಟವು ಎಂದು ವಿವರಿಸಿದ. ಹತ್ತೊಂಬತ್ತನೆಯ ಶತಮಾನದ ಆರಂಭದಿಸೆಯಲ್ಲಿ ಕುವಿಯರ್‍ನ ಬರವಣಿಗೆಗಳು ಈ ವಾದಕ್ಕೆ ಪುಷ್ಟಿಕೊಟ್ಟಿದ್ದುವು. ಆದ್ದರಿಂದಲೇ, ಜರ್ಮನಿಸಂಜಾತನಾದ ಪ್ರಖ್ಯಾತ ಫ್ರೆಂಚ್ ಪ್ರಕೃತಿಶಾಸ್ತ್ರಜ್ಞ, ರಾಜನೀತಿಜ್ಞ ಮತ್ತು ಆಡಳಿತಗಾರ ಲಿಯೊಪೊಲ್ಡ್ ಚೆರಟಿಯನ್ ಫ್ರೆಡೆರಿಕ್ ಡಗೊಬರ್ಟ್ ಬಾರೊನ್ ಕುವಿಯರ್ (ಜಾರ್ಜೆಸ್ ಬಾರೊನ್ ಕುವಿಯರ್, 1769-1832) ಎಂಬಾತ ಸಾಮಾನ್ಯವಾಗಿ ಪ್ರಳಯವಾದದ ಪ್ರಮುಖ ಪ್ರವಾದಿಯೆಂದು ಪ್ರಖ್ಯಾತನಾಗಿದ್ದಾನೆ.

	ಪ್ರಳಯವಾದಿಗಳ ಪ್ರಕಾರ, ಆದಿಯಿಂದಲೂ ಭೂ ಮೇಲ್ಮೈಯಲ್ಲಿ ನಡೆದಿರುವ ಭೂವೈಜ್ಞಾನಿಕ ಬದಲಾವಣೆಗಳನ್ನು ಇಂದು ನಾವು ಕಾಣುತ್ತಿರುವ ಬದಲಾವಣೆಗಳೊಡನೆ ಹೋಲಿಸಿದಾಗ, ಭೂಚರಿತ್ರೆಯಲ್ಲಿ ಕೇವಲ ತೀವ್ರವಾದ ಪ್ರಳಯ ಕಾರ್ಯಗಳಿಗೆ ಮಾತ್ರ ವಿವರಣೆ ನೀಡಬಹುದು. ಉದಾಹರಣೆಗೆ, ಪ್ರಪಂಚದ ವಿಶಾಲ ಭೂಭಾಗಗಳು ನೀರಿನಿಂದ ಆವೃತವಾಗುವುದು ಮತ್ತು ಜ್ವಾಲಾಮುಖಿಗಳು ಕ್ರಿಯೆ ನಡೆಸುವುದು ಪ್ರಮುಖ ಪ್ರಳಯ ಕಾರ್ಯಗಳು. ಇವು ಬೈಬಲ್ ಗ್ರಂಥದಲ್ಲಿ ವರ್ಣಿಸಿರುವ ಮಹಾ ಪ್ರಳಯ ಮತ್ತು ಈಗಿನ ವೆಸುವಿಯಸ್ ಅಗ್ನಿಪರ್ವತ ಪ್ರಕೋಪಗಳಿಗೆ ಸಮವಾದವು. ಆದ್ದರಿಂದ ಸೃಷ್ಟಿಯ ಆದಿಯಲ್ಲಿಯೂ ಇಂಥ ಕಾರ್ಯಾಚರಣೆಗಳಾಗಿವೆಯೆಂದು ಊಹಿಸುವುದು ಮತ್ತು ಅವುಗಳಿಗೆ ಭೂವೈಜ್ಞಾನಿಕ ವಿವರಣೆಗಳನ್ನು ನೀಡುವುದು ತಪ್ಪಾಗಲಾರದು, ಒಂದು ಪರ್ವತಸ್ತೋಮ ಮೇಲೇಳುವುದು ಪ್ರಳಯ ಕ್ರಿಯೆಯಲ್ಲವೆ? ವಿಶಾಲ ಭೂಭಾಗಗಳು ಮಹಾಪ್ರಳಯದ ನೀರಿನಡಿಯಲ್ಲಿ ಮುಳುಗುವುದು ಮತ್ತು ಗತಕಾಲದ ಪ್ರಾಣಿಸಮೂಹ ನಿರ್ಮೂಲವಾಗಿ ಜೀವ್ಯವಶೇಷಗಳಾಗುವುದು ಇನ್ನೂ ತಿಳಿಯಬೇಕಾದ ಪ್ರಕೃತಿಯ ಒಂದು ಪ್ರಕೋಪ ಕಾರ್ಯವಲ್ಲವೆ? ಪ್ರಳಯವಾದಿಗಳು ಭೂಮಿಯಲ್ಲಿ ಕಂಡುಬರುವ ಹಲವಾರು ಬದಲಾವಣೆಗಳಿಗೆ ಕಾರಣಗಳನ್ನು ತಿಳಿಸಿದರು. ಪರ್ವತಸ್ತೋಮದ ಶಿಲೆಗಳಲ್ಲಿ ಕಾಣುವ ಮಡಿಕೆಗಳು, ಸ್ತರಭಂಗಗಳು, ಶಿಲಾಬಿರುಕುಗಳು, ಮೇಲಾಗಿ ಹಲವಾರು ಸಹಸ್ರಮೀಟರುಗಳಷ್ಟು ಮೇಲಕ್ಕೆ ಪರ್ವತಗಳು ಒಗೆಯಲ್ಪಟ್ಟಿರುವುದಕ್ಕೆಲ್ಲ ಕಾರಣ ಪ್ರಳಯಗಳೇ ಎಂದು ವಿವರಿಸಿದರು.

	ಭೂಮಿಯ ಶಿಲಾಕಡತದಲ್ಲಿ ಸಾಕಷ್ಟು ಮಂದವಾದ ಪೆಂಟೆಶಿಲೆ (ಕದಂಬಶಿಲೆ). ದಪ್ಪ ಮರಳು ಶಿಲೆ, ನಯವಾದ ಮರಳು ಶಿಲೆ ಇವುಗಳೆಲ್ಲ ಹಲವಾರು ಹಂತಗಳಲ್ಲಿ ಪದೇ ಪದೇ ಕಂಡು ಬರುವುದಕ್ಕೆಲ್ಲ ಭೂಮಿಯಲ್ಲಿ ಆಗಿಂದಾಗ್ಯೆ ನಡೆದಿರುವ ಉತ್ಪಾತಗಳೇ ಕಾರಣವಾಗಿರಬೇಕೆಂಬುದು ನಿರ್ವಿವಾದವಾದದ್ದು. ವಿಪುಲ ಅಗ್ನಿಶಿಲೆಗಳಿಂದಾದ ದಟ್ಟ ಪರ್ವತಸಾಲುಗಳ ನಿರ್ಮಾಣಕ್ಕೆ ಬೇಕಾದ ಬೃಹತ್ ಪ್ರಮಾಣದ ಶಿಲಾರಸ ತನ್ನಷ್ಟಕ್ಕೆ ತಾನೇ ಹೊರಬರಲು ಸಾಧ್ಯವಿಲ್ಲ. ಪ್ರಕೃತಿಯ ಪ್ರಕೋಪದಿಂದ ಆಗಿಂದಾಗ್ಯೆ ಭೂಗರ್ಭದಿಂದ ನುಗ್ಗಿ ಶಿಲಾಪದರಗಳನ್ನು ಸೀಳಿಕೊಂಡು ಹೊರಹೊಮ್ಮಿ ನಿಧಾನವಾಗಿ ಆರಿ ತಣ್ಣಗಾಗಿ ಗಟ್ಟಿಶಿಲೆಗಳಾಗಿವೆ. ಇವೆಲ್ಲ ಕ್ರಿಯೆಗಳಿಗೂ ಪ್ರಳಯಗಳೇ ಮೂಲಕಾರಣವೆಂದು ವಿಶ್ಲೇಷಿಸಲಾಗಿದೆ.

	ಇಪ್ಪತ್ತನೆಯ ಶತಮಾನದಲ್ಲಿ ನವೀನ ಪ್ರಳಯವಾದ (ನಿಯೋಕ್ಯಟಸ್ಪ್ರಾಫೀಸಮ್) ಗುಂಪೊಂದು ಭೂವಿಜ್ಞಾನ ಚರಿತ್ರೆಯಲ್ಲಿಯ ಪರ್ವತ ಉಗಮ, ಸಮುದ್ರ ಅತಿಕ್ರಮಣ, ಸಮುದ್ರ ಹಿಂಜರಿತ, ಜೀವಿಗಳ ವಿಕಾಸ ಮತ್ತು ವಂಶ ನಷ್ಟಹೊಂದುವುದು ಮುಂತಾದವೆಲ್ಲವೂ ತಾಳಬದ್ಧ ಮಿಡಿತ ಅಥವಾ ಸ್ಪಂದನದಿಂದಾಗುವುವೆಂದು ವಿವರಿಸಲು ಪ್ರಯತ್ನಪಟ್ಟಿದೆ. ಭೂಮಿಯಲ್ಲಿ ಆಗುತ್ತಿರುವ ಇಂಥ ಬದಲಾವಣೆಗಳಿಗೆಲ್ಲ ಅನಿರೀಕ್ಷಿತ, ಮತ್ತು ತತ್‍ಕ್ಷಣ ಪ್ರಚಂಡತೆಯ ಕಾರಣವೆಂದು ಈ ವಾದವನ್ನು ಪ್ರತಿಪಾದಿಸುತ್ತಿದ್ದವರೆಲ್ಲರ ನಂಬಿಕೆ. ಆದರೆ ಇಂಥ ವೈಪರೀತ್ಯ ಅಥವಾ ಬದಲಾವಣೆಗಳು ದೀರ್ಘ ಕಾಲಾವಧಿಯಲ್ಲಿ ನಿಧಾನಕ್ರಿಯೆಗಳಿಂದಲೂ ವಿವರಿಸಬಹುದೆಂದು ತಿಳಿಯುವತನಕ ಪ್ರಳಯಕಾಲದಲ್ಲಿ ನಂಬಿಕೆ ನೆಲಸಿತ್ತು. ಈಗ ಇದಕ್ಕೆ ಐತಿಹಾಸಿಕ ಮಹತ್ತ್ವ ಮಾತ್ರ.
(ಎಂ.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ